Wednesday, May 6, 2020
CREDAI ಪುಂಗಿಗೆ ತಲೆದೂಗುವ ಸರ್ಕಾರ

 


ಕ್ರೆಡೈ (CREDAI) ಯವರು ಹೇಳಿದರು ಎನ್ನುವ ಕಾರಣಕ್ಕೆ ರೈಲುಗಳನ್ನು ರದ್ದುಪಡಿಸಿ, ಅವರ ಜೀತಕ್ಕೆ ವಲಸೆ ಕಾರ್ಮಿಕರ ಲಭ್ಯತೆಯನ್ನು ಖಾತ್ರಿಪಡಿಸಿದ ಘನ (ಬಂಡೆಗಿಂತಲೂ ಗಟ್ಟಿಯಾದಂತಿದೆ ಅದರ ಹೃದಯ) ಸರ್ಕಾರದ ಮೇಲೆ ಯಾವ ಆಕಾಶದಿಂದ ಪುಷ್ಪವೃಷ್ಟಿ ಮಾಡೋಣ?

ಎಲ್ಲಾ ಪ್ರಜೆಗಳನ್ನೂ ಸಮಾನವಾಗಿ ಕಾಣುವ ಜವಾಬ್ದಾರಿ ಅರಿತಿರುವ ಆಡಳಿತಗಾರರಾಗಿದ್ದರೆ, " ಅವರು ನಿಮ್ಮ ಕಾರ್ಮಿಕರು, ಅವರಿಗೆ ಕಳೆದೆರಡು ತಿಂಗಳ ಸಂಭಾವನೆ ಕೊಡುವ ವ್ಯವಸ್ಥೆ ಮಾಡಿ, ಮುಂದಿನ ಕೆಲಸದ ಆಶ್ವಾಸನೆಯನ್ನು ನೀಡಿ ಇಲ್ಲೇ ಉಳಿಯುವಂತೆ ಮನವೊಲಿಸಿ" ಎನ್ನಬಹುದಾಗಿತ್ತಲ್ಲವೇ?  ಗುತ್ತಿಗೆದಾರರನ್ನು ಅವಲಂಬಿಸಿರುವ  ಬಿಲ್ಡರ್‌/ ಡೆವೆಲಪರ್‌ಗಳಿಗೆ ಕಾರ್ಮಿಕರ ಜೊತೆ ನೇರ ಸಂಪರ್ಕ ಇಲ್ಲದೆ ಇರಬಹುದು, ಆದರೆ ಸಂವಿಧಾನತ್ಮಕವಾಗಿ ಆಡಳಿತ ನಡೆಸಬೇಕಾದ ಸರ್ಕಾರದ ಮೇಲೆಯೇ ಒತ್ತಡ ಹಾಕಿ ತಮಗೆ ಬೇಕಾದ ನಿರ್ಧಾರ ಹೊರಡಿಸಬಲ್ಲ ಸಾಮರ್ಥ್ಯ ಉಳ್ಳ ಕ್ರೆಡೈಗೆ ಶ್ರಮಿಕ ಗುತ್ತಿಗೆದಾರರ ಮೂಲಕ ಕಟ್ಟಡ ಕಾರ್ಮಿಕರ ಮನವೊಲಿಸುವುದು ಅಸಾಧ್ಯವಾದ ಕೆಲಸವೇ? ಆದರೆ ಕಾರ್ಮಿಕರ ರೋಧನಕ್ಕಿಂತ ಬಿಲ್ಡರ್‌ಗಳ ಪುಂಗಿಯೇ ಆಪ್ಯಾಯಮಾನವಲ್ಲವೇ? ಅವರ ಎಂಜಲು ಚಿಮುಕುವ ಪುಂಗಿಯ ನಾದಕ್ಕೆ ತಲೆದೂಗದ ಯಾವುದೇ ಸರಕಾರವನ್ನು ಇದುವರೆಗೆ ನಾವು ವಿಧಾನಸೌಧದೊಳಗೆ ಕಂಡಿಲ್ಲ.

ಪರ್ಯಾಯ ಆರ್ಥಿಕ ಮೂಲಗಳ ಕ್ರೋಢೀಕರಣಕ್ಕಾಗಿ ಹಾಗೂ ನಿಯಮ ಮೀರಿ ಮನೆ ಕಟ್ಟಿರುವ ಬಡವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಅಕ್ರಮ ಸಕ್ರಮ ಕಾಯ್ದೆ ಜಾರಿಗೊಳಿಸುವ ತೀರ್ಮಾನವನ್ನು ಏಪ್ರಿಲ್‌ 17ರಂದು ಸನ್ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದು ಕೊಳ್ಳಲಾಯಿತು.  ದಿಗ್ಬಂಧನದಿಂದಾಗಿ ಬಡವರು, ಕೆಳ ಮದ್ಯಮ ವರ್ಗದವರು ತತ್ತರಿಸಿ ಹೋಗಿದ್ದಾರೆ. ಅಕ್ರಮ ಸಕ್ರಮದ ಮೂಲಕ  ಸರ್ಕಾರ ಅವರಿಂದ  ಹೇಗೆ ಸಂಪನ್ಮೂಲ ಸಂಗ್ರಹಿಸುತ್ತದೆ ಅರ್ಥವಾಗುತ್ತಿಲ್ಲ! ಸಾಲ, ಸೋಲ ಮಾಡಿ ಪುಟ್ಟ ಮನೆಯೊಂದನ್ನು ಕಟ್ಟಿಕೊಂಡ ಬಡವರು ಮತ್ತು ಮಧ್ಯಮವರ್ಗದವರನ್ನು ಗುರಾಣಿಯಾಗಿ ಬಳಸಿಕೊಂಡು ತರುವ ಈ ಅಕ್ರಮ ಸಕ್ರಮ ಪ್ರಕ್ರಿಯೆಯ ಗರಿಷ್ಠ ಫಲಾನುಭವಿಗಳು ಬೃಹತ್‌ ಗಾತ್ರದ ಅಕ್ರಮಿಗಳೇ ಎಂದು ನಮ್ಮ 17 ವರ್ಷಗಳ ಕ್ಷೇತ್ರಾನುಭವ ಹೇಳುತ್ತದೆ. 

2007ರಲ್ಲಿ ಹೊರಬಂದ THE KARNATAKA TOWN AND COUNTRY PLANNING AND CERTAIN OTHER LAWS (AMENDMENT) ACT, 2004 ಕಾಯ್ದೆಯ  76 FFF ನಲ್ಲಿ ʻʻಕರ್ತವ್ಯಚ್ಯುತಿಗೈದ ಅಧಿಕಾರಿಯ ವಿರುದ್ಧ ದಂಡನಾ ಕ್ರಮವನ್ನು ಜಾರಿಗೊಳಿಸಬೇಕುʼ ಎಂಬ ಉಲ್ಲೇಖವಿದ್ದರೂ, ನಂತರದ ತಿದ್ದುಪಡಿಗಳಲ್ಲಿ ಹಾಗೂ 2013ರ ಅಂತಿಮ ಕಾಯ್ದೆಯಲ್ಲಿ ಈ ಅಂಶವನ್ನು ಉದ್ದೇಶಪೂರ್ವಕವಾಗಿ ಹೊರಗಿಟ್ಟ ಆಡಳಿತಗಾರರನ್ನು ನಂಬುವುದು ಕಷ್ಟವಾದರೂ, ಆರ್ಥಿಕ ಹಿನ್ನಡೆಯ ಈ ಕಾಲದಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ಸರಕಾರದ ಮೇಲಿರುವ ಒತ್ತಡವನ್ನು ಅರ್ಥಮಾಡಿಕೊಂಡು ತಾ 23.04.2020ರಂದು  ಈ ಕೆಳಗಿನಂತೆ ಮಿಂಚಂಚೆಯ ಮೂಲಕ ಸರಕಾರಕ್ಕೆ  ಪ್ರತಿಕ್ರಿಯಿಸಿದ್ದೇವೆ. ಮಂಗಳೂರಿಗೆ ಸಂಬಂಧಪಟ್ಟಂತೆ ಈ ಪ್ರತಿಕ್ರಿಯೆ.

ರಿಗೆ,                                                                     23.04.2020

ಸನ್ಮಾನ್ಯ ಮುಖ್ಯಮಂತ್ರಿಗಳು
ವಿಧಾನಸೌಧ, ಬೆಂಗಳೂರು – ೧

ಸನ್ಮಾನ್ಯರೇ,

ವಿಷಯ:  ಕೋವಿಡ್‌19ರ ಹಿನ್ನೆಲೆಯಲ್ಲಿ ಅಕ್ರಮ-ಸಕ್ರಮ ಮರು ಜಾರಿಗೆ ತರುವ ಕರ್ನಾಟಕ ಸರ್ಕಾರದ ನಿರ್ಧಾರದ ಕುರಿತು

ಕೋವಿಡ್‌19ರ ಹಿನ್ನೆಲೆಯಲ್ಲಿ ಆದಾಯ ಕ್ರೋಡೀಕರಣಕ್ಕೆ ಅಕ್ರಮ-ಸಕ್ರಮ ಮರು ಜಾರಿಗೆ ತರುವ ಕರ್ನಾಟಕ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಈ ಕೆಳಕಂಡ ಅಂಶಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ:

1. ಅಕ್ರಮ ಸಕ್ರಮದ ವಿರುದ್ಧ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ (WP 8895/2015) ನಾವು ಎತ್ತಿದ್ದ ಆಕ್ಷೇಪಗಳಿಗೆ  ಸಂಬಂಧಿಸಿದಂತೆ ನಮ್ಮ  ನಿಲುವಿನಲ್ಲಿ ಇಂದಿಗೂ ಯಾವುದೇ ಬದಲಾವಣೆ ಆಗಿಲ್ಲ. ಹಾಗಾಗಿ ಈಗಲೂ ಅಕ್ರಮ ಸಕ್ರಮದ ಬಗ್ಗೆ ನಮ್ಮ ಅಸಮ್ಮತಿ ಇದೆ ಎಂದು ತಿಳಿಸ ಬಯಸುತ್ತೇವೆ. 

2. ನಮ್ಮ ನಿಲುವು ಹೀಗಿದ್ದರೂ, ಕೋವಿಡ್-19ರ ಪರಿಣಾಮಗಳನ್ನು ನಿರ್ವಹಿಸಲು ಹಣ ಕ್ರೋಢೀಕರಣಕ್ಕಾಗಿ ಅಕ್ರಮ-ಸಕ್ರಮವನ್ನು ಜಾರಿಗೆ ತರುವುದು ಸರ್ಕಾರಕ್ಕೆ ಅನಿವಾರ್ಯವಾಗಿದ್ದಲ್ಲಿ, ಅಕ್ರಮ ಸಕ್ರಮ ಯೋಜನೆಯ ಫಲಾನುಭವಿ ನಿರ್ಮಿತಿಗಳಿಂದ, ಈ ಕೆಳಗಿನ ಅಂಶಗಳ ಉಲ್ಲಂಘನೆಯಾಗುತ್ತಿಲ್ಲ ಎಂದು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ನಾವು ನಿರೀಕ್ಷಿಸುತ್ತೇವೆ. 

ಅ.) ಭೂ ಉಪಯೋಗ ಬದಲಾವಣೆ,
ಆ) ಕಟ್ಟಡ ಬಳಕೆ (ಉದಾಹರಣೆಗೆ, ವಸತಿ ಪ್ರದೇಶಗಳಲ್ಲಿ ಪಿ ಜಿ ಇತ್ಯಾದಿ)
ಇ) ಭೂ ಅತಿಕ್ರಮಣಗಳು (ಉದಾಹರಣೆಗೆ, ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಅತಿಕ್ರಮಿಸುವ ಕಟ್ಟಡಗಳು), ಅಥವಾ
ಈ) ಕಟ್ಟಡ (ಸ್ವರೂಪ) - ಎಫ್‌ಎಆರ್, ನಡುಜಾಗ (ಕಟ್ಟಡದ ಸುತ್ತ ಅಗ್ನಿಶಾಮಕ ವಾಹನದ ಸಂಚಾರವನ್ನು ಸುಗಮವಾಗಿಸುವಷ್ಟು ಕಾನೂನು ಬದ್ಧ ಸ್ಥಳ)   ಮತ್ತು ಇತರ ನಿಯಮಗಳು (ಪಾರ್ಕಿಂಗ್ ಇತ್ಯಾದಿ), 
ಉ) ನಿರ್ಮಿತಿ, ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಗೆ ಅಪಾಯ ತರುವಂತಿರಬಾರದು ಅಥವಾ ಅದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಆಗುವಂತಿರಬಾರದು.

3. ಕೋವಿಡ್‌19 ಸಂಬಂಧೀ ಲಾಕ್‌ಡೌನ್‌ನಿಂದಾಗಿ ಮಧ್ಯಮ, ಕೆಳಮಧ್ಯಮ ಮತ್ತು ಬಡ ವರ್ಗಗಳು ಆರ್ಥಿಕವಾಗಿ ತತ್ತರಿಸಿರುವುದರಿಂದ, ಹಾಗೂ ಈ ನಿರ್ಮಾಣದ ಅಕ್ರಮಗಳಿಂದ ಲಾಭ ಗಳಿಸಿದವರು ಡೆವಲಪರ್‌ಗಳು ಮತ್ತು ಬಿಲ್ಡರ್‌ಗಳು ಹೊರತು ಖರೀದಿದಾರರಲ್ಲವಾದ್ದರಿಂದ, ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಅಕ್ರಮ ಸಕ್ರಮವನ್ನು, ದೊಡ್ಡ ಪ್ರಮಾಣದ ಡೆವಲಪರ್‌ಗಳು ಮತ್ತು ಬಿಲ್ಡರ್‌ಗಳನ್ನು (ನಿರ್ದಿಷ್ಟ ಗಾತ್ರದ ನಿರ್ಮಾಣ ಯೋಜನೆಗಳು / ಪ್ಲಾಟ್‌ಗಳು ಇತ್ಯಾದಿ) ಗುರಿಯಾಗಿರಿಸಿಕೊಂಡು ತರುವುದು ಸಂಪನ್ಮೂಲ ಸಂಗ್ರಹಣೆಯ ದೃಷ್ಟಿಯಿಂದ ನ್ಯಾಯಯುತ.

4) ಮಂಗಳೂರಿನಲ್ಲಿ ಈ ಹಿಂದೆ ಸಕ್ರಮೀಕರಣ ಒಂದು ಬಾರಿ ಆಗಿದ್ದು ಈ ಬಗ್ಗೆ ನಾವು ನ್ಯಾಯಾಲಯಕ್ಕೆ ದಾಖಲೆಗಳನ್ನೂ ಸಲ್ಲಿಸಿರುತ್ತೇವೆ. “ನಗರ, ಪಟ್ಟಣ ಪ್ರದೇಶಗಳಲ್ಲಿ ನಿಯಮ ಬಾಹಿರವಾಗಿ ತಲೆ ಎತ್ತಿರುವ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಯೋಜನೆಯನ್ನು ಒಮ್ಮೆ ಮಾತ್ರ ಜಾರಿಗೊಳಿಸಲಾಗುವುದು” ಎಂದು ಸರ್ಕಾರ ಕಾಯಿದೆ ತರುವ ಸಂದರ್ಭದಲ್ಲೇ ಘೋ಼ಷಿಸಿರುವುದರಿಂದ ಹಾಗೂ ನ್ಯಾಯಾಲಯಕ್ಕೂ ಹಾಗೆಯೇ ತಿಳಿಸಿರುವುದರಿಂದ, ಸಕ್ರಮೀಕರಣದ ಫಲವನ್ನು ಪಡೆದ ನಗರಗಳನ್ನು ತಾವು ಕೋವಿಡ್‌೧೯ರ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಢಿಕರಣಕ್ಕಾಗಿ ಮಾಡಹೊರಟಿರುವ ಅಕ್ರಮ ಸಕ್ರಮ ಕ್ರಿಯೆಯಿಂದ ಹೊರಗಿಡಬೇಕು.

5. ನಿರ್ಮಿತಿ ಅಪಾಯಕರವಾಗಿದ್ದರೆ: 
ಅ) ಆಸ್ತಿ ಮಾಲೀಕರು (ಖಾಸಗಿ ಡೆವಲಪರ್ / ಬಿಲ್ಡರ್) ವಾರ್ಷಿಕ ದಂಡ ಶುಲ್ಕವನ್ನು ಪಾವತಿಸಬೇಕು (ಉಲ್ಲಂಘನೆಯ ಪ್ರಕಾರವನ್ನು ಆಧರಿಸಿ ನಿರ್ಧರಿಸಬೇಕು)
ಆ) ಉಲ್ಲಂಘನೆಯ/ಉಲ್ಲಂಘಿಸಿದವರ ಮಾಹಿತಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಸಾರ್ವಜನಿಕವಾಗಿ ಲಭ್ಯವಾಗುವಂತೆ ನೀಡಬೇಕು. 
ಇ) ಅದಲ್ಲದೆ, ಪರಿಸರ ಕಾನೂನುಗಳು ಮತ್ತು ಆರೋಗ್ಯ ಇಲಾಖೆಯ ಆದೇಶಗಳ ಶಾಸನಾತ್ಮಕ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ (ಕೋವಿಡ್-19ರ ಹಿನ್ನೆಲೆಯಲ್ಲಿ)  ನಿಯಮಗಳನ್ನು ಪಾಲಿಸಲು / ಅಥವಾ ಉಲ್ಲಂಘಿತ ಕಟ್ಟಡ ಯಾ ವಸತಿ ಪ್ರದೇಶವನ್ನು ಮಾರ್ಪಡಿಸಲು ಕಾನೂನು ಪರಿಣಿತರ ಸಲಹೆ ಪಡೆದು ಖಾಸಗಿ ಡೆವಲಪರ್ / ಬಿಲ್ಡರ್ ಗಳಿಗೆ ಒಂದು ಪ್ರೊಬೇಷನರಿ ಅವಧಿಯನ್ನು (ಅಭಿವೃದ್ಧಿಯ ಸ್ವರೂಪವನ್ನು ಹೊಂದಿಕೊಂಡು) ನೀಡಬಹುದು.  
ಉ) ಪ್ರೊಬೇಷನರಿ ಅವಧಿಯೊಳಗೆ ಅವರಿಗದು ಸಾಧ್ಯವಾಗದಿದ್ದರೆ, ಕಾನೂನುಬಾಹಿರ ಅಥವಾ ಅಪಾಯಕಾರಿಯೆಂದು ತೋರುವ ನಿರ್ಮಾಣ ಅಥವಾ ಅದರ ಭಾಗವನ್ನು ಕೆಡವಬೇಕಾಗುತ್ತದೆ. 
ಊ) ಒಂದುವೇಳೆ ಪ್ರೊಬೇಷನರಿ ಅವಧಿಯೊಳಗೆ ಅವರು ನಿಯಮಗಳನ್ನು ಪಾಲಿಸಿದರೆ / ಅಥವಾ ಉಲ್ಲಂಘಿತ ನಿರ್ಮಿತಿಯನ್ನು ಮಾರ್ಪಡಿಸಿ ಅಪಾಯಕಾರಿ ಸ್ಥಿತಿಯನ್ನು ತಗ್ಗಿಸಿದರೆ  ಆ ನಿರ್ಮಿತಿಯನ್ನು ನಿಗದಿತ ಶುಲ್ಕದೊಂದಿಗೆ ಸಕ್ರಮಗೊಳಿಸಬಹುದು (ಅಲ್ಲಿಯವರೆಗೆ ವಾರ್ಷಿಕ ದಂಡವನ್ನು ಮುಂದುವರಿಸಬೇಕು). 

6) ಉಲ್ಲಂಘನೆಗಳನ್ನು ನಿಗದಿತ ಸ್ವರೂಪದಲ್ಲಿ ದಾಖಲಿಸಲು ಮತ್ತು ಅದನ್ನು ಸಲ್ಲಿಸಲು ಸರ್ಕಾರವು ಆಯಾ ವಾರ್ಡ್‌ನಲ್ಲಿನ ಉಲ್ಲಂಘನೆಗಳನ್ನು ಗುರುತಿಸಲು ನಿವಾಸಿ ಕ್ಷೇಮಾಭ್ಯುದಯ ಸಂಘ (RWA) / ವಾರ್ಡ್ ಸಮಿತಿ ಸದಸ್ಯರನ್ನು ನೋಂದಾಯಿಕೊಳ್ಳಬೇಕು. ನಂತರ ಸಂಬಂಧಪಟ್ಟ ಸರ್ಕಾರಿ ಸಂಸ್ಥೆ (ನಗರಪಾಲಿಕೆಗಳು, ಆರೋಗ್ಯ ಇಲಾಖೆ ಮತ್ತು ಇತರ ಸಂಬಂಧಿತ ಸರ್ಕಾರಿ ವ್ಯವಸ್ಥೆಗಳು) ದಾಖಲಾದ ಮಾಹಿತಿಯ ಲೆಕ್ಕಪರಿಶೋಧನೆಯನ್ನು ಮಾಡಿ ಉಲ್ಲಂಘಿಸುವವರ ಪಟ್ಟಿಯನ್ನು ಅಂತಿಮಗೊಳಿಸಬೇಕು. ಆಮೇಲೆ ಈ ಪಟ್ಟಿಯನ್ನು ಸಾರ್ವಜನಿಕಗೊಳಿಸಬೇಕು ಮತ್ತು ಮೇಲೆ ಉಲ್ಲೇಖಿಸಿದ ದಂಡನಾ ಕ್ರಮಗಳನ್ನು ಕೈಗೊಳ್ಳಬೇಕು.

6. ನಕ್ಷೆ ಮಂಜೂರಾತಿ ಪಡೆದ ಬಳಿಕವೇ ಕಟ್ಟಡ ನಿರ್ಮಾಣ ಕಾರ್ಯ ಕೈಗೊಳ್ಳಬೇಕು ಎಂಬುವುದೂ ಸೇರಿದಂತೆ ನಿರ್ಮಾಣಪೂರ್ವದಿಂದ ಹಿಡಿದು ನಿರ್ಮಿತಿಯ ಕೊನೆಯ ಹಂತದವರೆಗೂ ಯಾವುದೇ ಉಲ್ಲಂಘನೆಯಾಗದ ಹಾಗೆ, ಪರಿಶೀಲನೆಗೆ ಹಾಗೂ ಉಲ್ಲಂಘನೆಗಳು ಕಂಡುಬಂದಲ್ಲಿ ಸೂಕ್ತ ಕ್ರಮಗಳಿಗೆ ಈಗಿರುವ ಕಾಯ್ದೆಯಲ್ಲಿಯೇ ನಿಯಮಗಳಿವೆ. ಸಂಬಂಧಿಸಿದ ಅಧಿಕಾರಿಗಳು ನಿಯಮಾನುಸಾರ ತಮ್ಮ ಕರ್ತವ್ಯವನ್ನು ನಿರ್ವಹಿಸದೆ ಉಲ್ಲಂಘನೆಗಳಿಗೆ ಅವಕಾಶ ಮಾಡಿಕೊಟ್ಟದ್ದರಿಂದಲೇ ಅಕ್ರಮ ನಿರ್ಮಾಣಗಳ ಸಮಸ್ಯೆ ನಗರಗಳ ಯೋಜಿತ ಅಭಿವೃದ್ಧಿಗೆ ತೊಡರುಗಾಲಾಗುತ್ತಿದೆ. ಹಾಗಾಗಿ ಅಧಿಸೂಚಿತ ಅಕ್ರಮಸಕ್ರಮ ಸಂಬಂಧೀ ಕಾಯಿದೆಯ 76 FFF ನಲ್ಲಿ ಉಲ್ಲೇಖಿಸಿರುವಂತೆ ಕರ್ತವ್ಯಚ್ಯುತಿಗೈದ ಅಧಿಕಾರಿಯ ವಿರುದ್ಧ ದಂಡನಾ ಕ್ರಮವನ್ನು ಜಾರಿಗೊಳಿಸಬೇಕು. ನಿಯಮಗಳನ್ನು ರೂಪಿಸುವಾಗ ಉದ್ದೇಶಪೂರ್ವಕವಾಗಿ ಹೊರಗಿಟ್ಟ ಈ ಅಂಶವನ್ನು ನಿಯಮಗಳಲ್ಲಿ ಸೇರಿಸಿದ ನಂತರವೇ ಕೋವಿಡ್-19ರ ಪರಿಣಾಮಗಳನ್ನು ನಿರ್ವಹಿಸಲು ಆದಾಯ ಕ್ರೋಢೀಕರಣಕ್ಕಾಗಿ ಅಕ್ರಮ-ಸಕ್ರಮ ಮರುಚಾಲನೆಗೊಳಿಸಲು ಸರಕಾರ ಮುಂದಾಗಬೇಕು. 

ವಂದನೆಗಳೊಂದಿಗೆ
--ಸಹಿ---
(ವಿದ್ಯಾ ದಿನ್‌ಕರ್ )
ಸಂಯೋಜಕಿ