Friday, April 17, 2020




ಕೋವಿಡ್‌-19ರ ನೆರಳಿನಲ್ಲಿ


ಭಾಗ: 1 - ನಗರಗಳ ಹೊತ್ತವರಿಗೆ ನೆರವು 


ಆಕೆಯ ಗಂಡ ತೀರಿಕೊಂಡು ಆರು ತಿಂಗಳು ಕಳೆದಿದೆ. ಕೂಲಿನಾಲಿ ಮಾಡಿಕೊಂಡು ಎರಡು ಪುಟ್ಟ ಮಕ್ಕಳನ್ನು ಸಾಕುತ್ತಿದ್ದಳು. ಕೊರೋನಾ ದಿಗ್ಬಂಧನ ಅವಳ ಏಕೈಕ ಜೀವನಾಧಾರವನ್ನು ಕಸಿದುಕೊಂಡಿತ್ತು. "ಎರಡು ದಿವಸದಿಂದ ಹೊಟ್ಟೆಗೇನೂ ಇಲ್ಲ, ನಮಗೇನಾದರೂ ಊಟದ ವ್ಯವಸ್ಥೆ ಮಾಡಿ ಮೇಡಂ" ಹಿಂದಿಯಲ್ಲಿ ಆಕೆ ಮಾತನಾಡುತ್ತಿದ್ದಳು. ಆಕೆಯ ಮಕ್ಕಳು ಜೋರಾಗಿ ಅಳುತ್ತಿರುವ ಸದ್ದು ಕೇಳಿಸುತಿತ್ತು. "ಆಯಿತು ಮಾಡೋಣ, ಎಲ್ಲಿಯವರು ನೀವು, ಎಲ್ಲಿದ್ದೀರಿ ಈಗ?" "ಜಾರ್ಖಂಡ್‍ನವಳು ಈಗ ಪಾಲ್ಗರ್‌ನಲ್ಲಿದ್ದೇನೆ". ಅಯ್ಯೋ ಪಾಪ! ಮಹಾರಾಷ್ಟ್ರದಿಂದ ಕರೆ ಮಾಡಿದ್ದಾರೆ, ಬಹುಶ: ಎಲ್ಲೋ ಒಂದು ಅಂಕಿ ವ್ಯತ್ಯಾಸ ಆಗಿ ಇಲ್ಲಿಗೆ ಕರೆ ಬಂದಿರಬಹುದು ಎಂದುಕೊಂಡು "ನಾನು ಮಂಗಳೂರಿನಲ್ಲಿರುವುದು, ಕರ್ನಾಟಕ ರಾಜ್ಯ" ಎಂದೆ. "ಗೊತ್ತಿದೆ ಮೇಡಂ, ಮಂಗಳೂರಿನಲ್ಲಿ ನಿನ್ನೆ ನೀವು ಜಾರ್ಖಂಡ್‍ನ ಕೆಲವರಿಗೆ ಊಟದ ವ್ಯವಸ್ಥೆ ಮಾಡಿದ್ರಲ್ವಾ, ಅದರಲ್ಲಿ ನನ್ನ ಸಂಬಂಧಿಗಳೂ ಇದ್ರು, ಅವರು ನನಗೆ ನಿಮ್ಮ ನಂಬರ್ ಕೊಟ್ರು, ದಯವಿಟ್ಟು ಏನಾದರೂ ವ್ಯವಸ್ಥೆ ಮಾಡಿ ಮೇಡಂ, ಮಕ್ಕಳನ್ನು ಸಂತೈಸ್ಲಿಕ್ಕಾಗ್ತಿಲ್ಲ" ಎಂದಳು. ಮುಳುಗಿದವರಿಗೆ ಹುಲ್ಲುಕಡ್ಡಿಯೇ ಆಸರೆ ಎಂಬಂತೆ ಆಕೆ ತನಗೆ ಸಿಕ್ಕಿದ ಮೊಬೈಲ್ ನಂಬರೊಂದನ್ನು ಹಿಡಿದು, ತನ್ನ ಬದುಕನ್ನು ಅರ್ಥಮಾಡಿಕೊಳ್ಳದ ಆಡಳಿತಗಾರರು ತನ್ನನ್ನು ಸಿಲುಕಿಸಿದ ಕ್ಲಿಷ್ಟ ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನಿಸುತಿದ್ದಳು! ಏನು ಹೇಳಬೇಕೆಂದು ತೋಚಲಿಲ್ಲ, "ನಾನು ನಿಮ್ಮಿಂದ ತುಂಬಾ ದೂರದಲ್ಲಿದ್ದೇನೆ, ಮಹಾರಾಷ್ಟ್ರದ ಸ್ನೇಹಿತರ ಬಳಿ ಮಾತನಾಡಿ ನಿಮಗೆ ಏನಾದರೂ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತೇನೆ" ಎಂದಷ್ಟೇ ಹೇಳಿದೆ.

ಕೊರೋನಾ ದಿಗ್ಬಂಧನದಿಂದಾಗಿ ಮಂಗಳೂರಲ್ಲಿ ಕಷ್ಟಕ್ಕೊಳಗಾದ ಒರಿಸ್ಸಾ ಮೂಲದ ಸುಮಾರು 50 ಮಂದಿ ಮೀನುಗಾರ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡುವಂತೆ ಒರಿಸ್ಸಾ ಕರಾವಳಿಯಲ್ಲಿ ಪರಿಸರ ಸಂಶೋಧನೆ ಮಾಡುತ್ತಿರುವ ಪರಿಚಿತೆಯೊಬ್ಬರು ತಾ 26-03-2020ರಂದು ಕೇಳಿಕೊಂಡರು. ಆ ಮೀನುಗಾರರಿಗೆ ಸೂಕ್ತ ವ್ಯವಸ್ಥೆ ಮಾಡುವ ಹಂತದಲ್ಲಿ, ಇತರರೂ ಇರಬಹುದೇ ಎಂದು ಪಟ್ಟಿ ಮಾಡ ಹೊರಟ ನಮಗೆ ಎದುರಾದದ್ದು ಸರ್ಕಾರಿ ಸಂತ್ರಸ್ತರ ಪಟ್ಟಿಯಲ್ಲಿ ಕಾಣಿಸಿಕೊಳ್ಳದಿದ್ದ ಅಗಾಧ ಸಂಖ್ಯೆಯ ದಿನಗೂಲಿ ವಲಸೆ ಕಾರ್ಮಿಕರು. ಇದ್ದಬದ್ದ ದಿನಸಿಯೆಲ್ಲಾ ಮುಗಿದು, ಕೊಳ್ಳಲು ದುಡ್ಡಿಲ್ಲದೆ, ಕಡ ಕೇಳಿ ತರಲು ಅಂಗಡಿಗಳೂ ತೆರೆದಿರದೆ ಹಸಿದು ಕಂಗಾಲಾಗಿದ್ದ ಮಾನವ ಸಂಪನ್ಮೂಲ! ಕಳೆದ ಶತಮಾನದ ಮಧ್ಯಭಾಗದಲ್ಲಿ ಉತ್ತಮ ಭವಿಷ್ಯದ ಕನಸು ಕಾಣುತ್ತಾ ಮುಂಬಯಿಗೂ, 1970ರ ನಂತರ ಅರಬ್ ದೇಶಗಳಿಗೂ ಗುಳೇ ಹೋದ ದಕ್ಷಿಣ ಕನ್ನಡಿಗರಂತೆ, ಉತ್ತಮ ಸಂಪಾದನೆಯ ಕನಸಿನಲ್ಲಿ ಜಿಲ್ಲೆಗೆ ಬಂದಿಳಿದ ಇವರಲ್ಲಿ ನಮ್ಮದೇ ಉತ್ತರ ಕರ್ನಾಟಕದ ಕಾರ್ಮಿಕರನ್ನು ಬಿಟ್ಟರೆ, ಜಾರ್ಖಂಡ್, ಬಿಹಾರ, ಉತ್ತರಪ್ರದೇಶ ಮತ್ತು ಒರಿಸ್ಸಾದವರೇ ಹೆಚ್ಚಾಗಿ ಕಾಣಸಿಗುತ್ತಾರೆ. ಮೀನುಗಾರಿಕೆಯಿಂದ ಹಿಡಿದು ಕಟ್ಟಡ ನಿರ್ಮಾಣ, ಸರಕು ಸಾಗಾಣಿಕೆ, ಕಿರು ಉದ್ಯಮ, ರಸ್ತೆ ನಿರ್ಮಾಣ ಇತ್ಯಾದಿ....ಕ್ಷೇತ್ರಗಳಲ್ಲಿ ಈ ವಲಸೆ ಕಾರ್ಮಿಕರನ್ನು ಕಾಣಬಹುದು. ಬೃಹತ್ ಉದ್ಧಿಮೆಗಳು, ಎಸ್ಇಜೆಡ್, ದೊಡ್ಡ ಕಟ್ಟಡ ಸಮುಚ್ಚಯ ನಿರ್ಮಾಣ ಯೋಜನೆಗಳ ಸಂದರ್ಭದಲ್ಲಿ ಬಹೃತ್ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಈ ಜಿಲ್ಲೆಯಲ್ಲಿ ಬಂದಿಳಿದದ್ದನ್ನು ಕಂಡಿದ್ದೇವೆ. ಕಾರ್ಮಿಕ ದಲ್ಲಾಳಿಗಳ ಮೂಲಕ, ಕಾರ್ಮಿಕ ಗುತ್ತಿಗೆದಾರರ ಮೂಲಕ ಮತ್ತು ಮಾನವ ಸಾಗಾಣಿಕೆಯ ಮೂಲಕವೂ ಕಾರ್ಮಿಕರ ಸರಬರಾಜು ನಡೆಯುತ್ತಿರುತ್ತದೆ. ಎಷ್ಟೋ ಗುತ್ತಿಗೆದಾರರು ಈ ಕಾರ್ಮಿಕರುಗಳನ್ನು ಕಾನ್ಸಂಟ್ರೇಷನ್ ಕ್ಯಾಂಪ್‍ಗಳಂತ ವ್ಯವಸ್ಥೆಯೊಳಗೆ ಇರಿಸಿ, ವಾರದ ರಜೆಯನ್ನೂ ನೀಡದೆ ಸಿಕ್ಕಾಪಟ್ಟೆ ದುಡಿಸಿ ದುಡಿದದ್ದಕ್ಕೆ ವೇತನ ನೀಡದೆ ಕಳುಹಿಸಿರುವ ಉದಾಹರಣೆಗಳು ಬಹಳ ಸಿಗುತ್ತವೆ. ದೊಡ್ಡ ದೊಡ್ಡ ಉದ್ಯಮಗಳ ನಿರ್ಮಾಣ ಕಾರ್ಯದಲ್ಲಿ ಮುಖ್ಯ ಗುತ್ತಿಗೆದಾರನ ಕೆಳಗೆ ಹಲವು ಮೆಟ್ಟಿಲುಗಳಲ್ಲಿ ಉಪಗುತ್ತಿಗೆದಾರರುಗಳಿರುವುದರಿಂದ ಈ ಕೆಲಸಗಾರರಿಗೆ ಅನ್ಯಾಯವಾದ ಸಂದರ್ಭದಲ್ಲಿ ಪರಿಹಾರ ಮರೀಚಿಕೆಯಾಗುತ್ತದೆ. 2011ರ ಸುಮಾರಿಗೆ, ಸಂಭಾವನೆ ನೀಡದೆ ದುಡಿಸಿಕೊಳ್ಳುತ್ತಿದ್ದ ಎಸ್‍ಇಜೆಡ್‍ನ ನಿರ್ಮಾಣ ಗುತ್ತಿಗೆದಾರ ಕಂಪೆನಿಯ ಮರಿಗುತ್ತಿಗೆದಾರನೊಬ್ಬನ ಬಲೆಯಿಂದ, ಪಶ್ಚಿಮ ಬಂಗಾಳದ 50 ಮಂದಿ ಪುರುಷ ಮತ್ತು ಮಹಿಳಾ ಕಾರ್ಮಿಕರನ್ನು ಅವರ ಕೋರಿಕೆಯಂತೆ ಹೊರತಂದು, ಅವರವರ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದೆವು. ಸ್ಥಳೀಯವಾಗಿ ಖ್ಯಾತರಾಗಿದ್ದ ಮಹಿಳಾ ವಕೀಲರು, ಪತ್ರಕರ್ತ ಮಿತ್ರರು ಇವರೆಲ್ಲರ ಸಹಕಾರದಿಂದ ಇದು ಸಾದ್ಯವಾಗಿತ್ತು. ಮಕ್ಕಳೂ ಸೇರಿದಂತೆ ಒರಿಸ್ಸಾದ ಕೆಲವು ಆದಿವಾಸಿಗಳನ್ನು ಮಾನವ ಸಾಗಾಣಿಕೆ ಮಾಡಿ ಮಂಗಳೂರಿನಲ್ಲಿ ಜೀತದ ರೀತಿಯಲ್ಲಿಯೇ ಇರಿಸಿಕೊಂಡಿದ್ದ ಒಂದು ಪ್ರಕರಣದಲ್ಲಿ ಪತ್ರಕರ್ತರು ಹಾಗೂ ಸಂಬಂಧಿತ ಇಲಾಖೆಗಳ ಸಹಕಾರದೊಂದಿಗೆ ಕಾರ್ಮಿಕರನ್ನು ಮುಕ್ತಗೊಳಿಸಲು ಸಾಧ್ಯವಾಗಿತ್ತು. ಆದರೆ ಕಾನೂನಿನ ಲೋಪವನ್ನು ಬಳಸಿಕೊಂಡ ಮಾನವ ಸಾಗಣೆದಾರ ಶಿಕ್ಷೆಯಿಂದ ತಪ್ಪಿಸಿಕೊಂಡ!

ಹೀಗೆ ದುಡಿಯುತ್ತಿರುವಾಗಲೇ ಅಭದ್ರವಾಗಿರುವ ವಲಸೆ ಕಾರ್ಮಿಕರ ಬದುಕು, ಲಾಕ್ಡೌನ್ ಆದಾಗ ಹೇಗಿರಬಹುದು ಎಂದು ಊಹಿಸುವುದು ಕಷ್ಟವಲ್ಲ. ಹೊಟ್ಟೆಪಾಡಿಗಾಗಿ ಸಾವಿರಾರು ಮೈಲು ದೂರ ಬಂದವವರಿಗೆ ಅವರದಲ್ಲದ ತಪ್ಪಿಗೆ ಹಸಿದಿರಬೇಕಾದ ಪರಿಸ್ಥಿತಿ ಬಂದಾಗ ಮಾನವೀಯತೆಯ ನೆಲೆಯಲ್ಲಾದರೂ ಅನ್ನ ನೀಡಬೇಕಾದದ್ದು ಅಂದಿನವರೆಗೂ ಅವರನ್ನು ದುಡಿಸಿಕೊಂಡವರ ಕರ್ತವ್ಯ.. ದುಡಿಸಿಕೊಂಡವರು ತಮ್ಮ ಹೊಣೆಯಿಂದ ನುಣುಚಿಕೊಂಡಾಗ ಮಧ್ಯಪ್ರವೇಶಿಸಿ ಅವರು ತಮ್ಮ ಕರ್ತವ್ಯವನ್ನು ಪಾಲಿಸುವಂತೆ ನೊಡುವುದು ಸರ್ಕಾರದ ಜವಾಬ್ದಾರಿ. ಅಕಸ್ಮಾತ್ ದುಡಿಸಿಕೊಂಡವರು ಅನ್ನ ನೀಡುವ ಸಾಮರ್ಥ್ಯ ಕಳೆದುಕೊಂಡಿದ್ದಲ್ಲಿ ಹಸಿವೆ ನೀಗಿಸುವ ಕರ್ತವ್ಯ ಈ ಕಾರ್ಮಿಕರ ಕಲ್ಯಾಣದ ಹೆಸರಿನಲ್ಲಿ ಸೆಸ್‌ ಸಂಗ್ರಹಿಸುತ್ತಿರುವ ಸರ್ಕಾರದ್ದಾಗುತ್ತದೆ. ಸರ್ಕಾರ ಈ ಕರ್ತವ್ಯವನ್ನು ನಿರ್ವಹಿಸುತ್ತದೆ ಕೂಡಾ. ಆದರೆ ಸರ್ಕಾರಿ ಯಂತ್ರ ಎಷ್ಟು ಬೃಹತ್ ಮತ್ತು ಭಾರ ಎಂದರೆ ಅತೀ ಭಾರ ಹೇರಿಕೊಂಡ ಎತ್ತಿನ ಗಾಡಿಯಂತೆ ಬಹಳ ನಿಧಾನವಾಗಿ ಚಲಿಸುತ್ತದೆ. ಹಾಗಾಗಿ ಅದರ ನಿರ್ಧಾರಗಳು ಕ್ರಿಯಾರೂಪದಲ್ಲಿ ಸಂತ್ರಸ್ತರ ಬಳಿ ಬರುವವರೆಗೆ ಮಾನವೀಯತೆಯ ನೆಲೆಯಲ್ಲಿ ಯಾರಾದರೂ ನೆರವು ನೀಡಬೇಕಾಗುತ್ತದೆ. ಸಹಜೀವಿಗಳ ಕಷ್ಟಕ್ಕೆ ಸ್ಪಂದಿಸುವ ಹಲವು ಗುಂಪುಗಳು, ವ್ಯಕ್ತಿಗಳು ಇರುವ ಮಂಗಳೂರಿನಲ್ಲಿ, ಲಾಕ್ ಡೌನ್ ಘೋಷಿತವಾದಂದಿನಿಂದ ನಗರ ಕೇಂದ್ರ ಭಾಗದಲ್ಲಿ ಅಸಹಾಯಕರಾಗಿ ಕಂಡು ಬಂದವರಿಗೆ ಊಟ ಒದಗಿಸುವ ಕಾರ್ಯದಲ್ಲಿ ಹಲವು ಗುಂಪುಗಳು ಸಕ್ರಿಯವಾಗಿದ್ದವು. ಯಾವುದಾದರೂ ಒಂದು ಗುಂಪನ್ನು ಸಂಪರ್ಕಿಸಿ ನಮ್ಮ ಗಮನಕ್ಕೆ ಬಂದ ಒರಿಸ್ಸಾದ ಮೀನುಗಾರರ ಆಹಾರದ ವ್ಯವಸ್ಥೆ ಮಾಡಲು ಕೋರಬಹುದು ಅಂದುಕೊಂಡೆವು. ಒರಿಸ್ಸಾದ ಮೀನುಗಾರರನ್ನು ಸಂಪರ್ಕಿಸಿ ಅವರ ಅವಶ್ಯಕತೆ ದಿನಸಿಯೇ ಅಥವಾ ಊಟವೇ ಎಂದು ತಿಳಿಯ ಪ್ರಯತ್ನಿಸಿದೆವು. "ಹೇಗಾದರೂ ಮಾಡಿ ನಮ್ಮನ್ನು ಒರಿಸ್ಸಾಕ್ಕೆ ತಲುಪಿಸಿಬಿಡಿ" ಎಂದಷ್ಟೇ ಅವರು ಹೇಳಿದರು. ಇದು ಅಸಾಧ್ಯ 
ಎಂದು ಅವರಿಗೆ ಮನದಟ್ಟು ಮಾಡಲು, ಮಂಗಳೂರಿನಿಂದ ಮೀನುಗಾರಿಕಾ ಇಲಾಖೆಯು ಕಳುಹಿಸಿದ್ದ 2000 ಮಂದಿ ಆಂಧ್ರದ ಮೀನುಗಾರರನನ್ನು ಆಂಧ್ರದ ಗಡಿಯಲ್ಲಿ ಪೋಲಿಸರು ತಡೆದು ನಿಲ್ಲಿಸಿದ ಪ್ರಕರಣವೇ ಸಾಕಾಗಿತ್ತು.

22-03-2020ರ ಜನತಾ ಕರ್ಫ್ಯೂ ಮತ್ತದನ್ನು ಹಿಂಬಾಲಿಸಿ ಬಂದ ನಿರ್ಬಂಧಗಳು ಹಾಗೂ ನಂತರದ ಲಾಕ್ಡೌನ್‌ನಿಂದ ಸಂತ್ರಸ್ತರಾದವರಿಗೆ ಸರ್ಕಾರದಿಂದ ಯಾವ ಪರಿಹಾರ ವ್ಯವಸ್ಥೆಯೂ ಆರಂಭವಾಗಿರದಿದ್ದ ಹಿನ್ನೆಲೆಯಲ್ಲಿ, ಹಸಿದವರಿಗೆ ಆಹಾರದ ಪೊಟ್ಟಣ ನೀಡುತ್ತಿದ್ದ ಗುಂಪೊಂದನ್ನು ಸಂಪರ್ಕಿಸಿ ಈ ಸಂತ್ರಸ್ತ ಮೀನುಗಾರರ ಹಸಿವು ನೀಗಿಸಲು ಕೇಳಿಕೊಂಡೆವು. ಅದಾದ ಸ್ವಲ್ಪ ಹೊತ್ತಿನಲ್ಲಿ ಬೆಂಗಳೂರಿನ ಮಿತ್ರರೊಬ್ಬರು ಕರೆ ಮಾಡಿ ರಾಯಿಕಟ್ಟೆ ಎಂಬಲ್ಲಿ ಜಾರ್ಖಂಡ್‍ನ 60 ಜನ ವಲಸೆ ಕಾರ್ಮಿಕರು ಹಸಿದಿರುವುದನ್ನು ತಿಳಿಸಿ ಸಹಾಯ ಮಾಡುವಂತೆ ಕೋರಿದರು. ಅಲ್ಲೇ ಕಾನದಲ್ಲಿರುವ ಪರಿಚಿತರೊಬ್ಬರನ್ನು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಬರುವಂತೆ ಹಾಗೂ ಸಂಪರ್ಕಕ್ಕಾಗಿ ಸಂತ್ರಸ್ತರೊಬ್ಬರ ಮೊಬೈಲ್ ಸಂಖ್ಯೆ ತರುವಂತೆ ಕೋರಿದೆವು. 60 ಅಲ್ಲ 103 ಮಂದಿ ಇದ್ದಾರೆ ಮತ್ತು ಬೆಳಿಗ್ಗೆಯಿಂದ ಹೊಟ್ಟೆಗೇನೂ ಬಿದ್ದಿಲ್ಲ ಎಂದು ತಿಳಿದು ಬಂತು. ಅವರಿಗೆ ತಕ್ಷಣ ವ್ಯವಸ್ಥೆ ಮಾಡಬೇಕಾಗಿತ್ತು. ಅದರ ವ್ಯವಸ್ಥೆಯಲ್ಲಿದ್ದ ಹಾಗೆ ಪಂಜಿಮೊಗೆರಿನಿಂದ ಕರೆ ಬಂತು ʻʻನಾವು 200 ಮಂದಿ ಇದ್ದೇವೆ, ನೀವು ರಾಯಿಕಟ್ಟೆಯವರಿಗೆ ಊಟ ಕೊಡ್ತೇನೆ ಅಂತ ಹೇಳಿದಿರಂತೆ, ದಯವಿಟ್ಟು ನಮಗೂ ಏನಾದರೂ ವ್ಯವಸ್ಥೆ ಮಾಡಿ, ಅಕ್ಕಿ, ಬೇಳೆ, ಗೋಧಿ ಹಿಟ್ಟು, ಆಲೂಗಡ್ಡೆ, ಈರುಳ್ಳಿ ಕೊಡಿಸಿದರೆ ನಾವೇ ಅಡಿಗೆ ಮಾಡಿಕೊಳ್ಳುತ್ತೇವೆ". ಹೀಗೆ ಬಿಡುವಿಲ್ಲದೆ ದೂರವಾಣಿ ಕರೆಗಳು ಬರಲಾರಂಭಿಸಿದವು. ಲಾಕ್ಡೌನ್ ಸಂತ್ರಸ್ತರ ಮತ್ತು ಹಸಿದವರಿಗೆ ಆಹಾರ ನೀಡುವ ಸಹೃದಯರ ಸಮನ್ವಯ ಕೆಂದ್ರವಾಗಿ, ವಸ್ತುತ ಕಾಲ್‌ಸೆಂಟರ್ನಂತೆ ಕಾರ್ಯಾಚರಿಸುವುದು ಅನಿವಾರ್ಯವಾಯಿತು. ಸಮನ್ವಯದ ಕಾರ್ಯ ಸಂಪೂರ್ಣವಾಗಿ ಮೊಬೈಲ್ ಮುಖಾಂತರವೇ ನಡೆಯುತಿತ್ತು. ಆಹಾರ ನೀಡುತ್ತಿದ್ದ ಸಹೃದಯರು ತಾವು ಈಗಾಗಲೇ ಗುರುತಿಸಿದ್ದ ಹಸಿದಿರುವ ವ್ಯಕ್ತಿಗಳಿಗೆ
ಆಹಾರ ನೀಡುವುದರ ಜೊತೆಗೆ ಕರೆಗಳು ಬಂದಂತೆ ನಾವು ಸೂಚಿಸುತ್ತಿದ್ದ ಹಸಿದ ವಲಸೆ ಕಾರ್ಮಿಕರು ಇರುವ ಸ್ಥಳಗಳಿಗೆ ಆಹಾರ ಅಥವಾ ಆಹಾರ ವಸ್ತುಗಳನ್ನು ತಲುಪಿಸುತ್ತಿದ್ದರು. 60 ಮಂದಿಯಿಂದ ಆರಂಭವಾದ ಸಂತ್ರಸ್ತರ ಪಟ್ಟಿ ಒಂದೇ ದಿನದಲ್ಲಿ 1500 ದಾಟಿತ್ತು, ಬೆಳಿಗ್ಗೆ 7 ಗಂಟೆಗೆ ಹಸಿದವರ ಕರೆಗಳು ಆರಂಭವಾದರೆ, ರಾತ್ರಿ 11.30-12.00 ರವರೆಗೂ ಕರೆಗಳು ಬರುತ್ತಿದ್ದವು. ನಮಗೆ ತಿಳಿಯದ ಒಂದಷ್ಟು ಗುಂಪುಗಳು ಆಹಾರ ನೀಡುವ ಕೆಲಸ ಮಾಡುತ್ತಿವೆ, ಹಾಗೂ ಸರಕಾರವೂ ಸಂತ್ರಸ್ತರ ಪಟ್ಟಿಯೊಂದನ್ನು ತಯಾರಿಸುತ್ತಿದೆ ಮತ್ತು ನಮಗೆ ಕರೆ ಮಾಡುತ್ತಿದ್ದ ಎಲ್ಲರೂ ಆ ಪಟ್ಟಿಗಳಲ್ಲಿಲ್ಲ ಎಂದು ನಮಗೆ ತಿಳಿದಿದ್ದರಿಂದ ಸಂತ್ರಸ್ತರ ಸಂಖ್ಯೆ ಬೃಹತ್ತಾಗಿ ಬೆಳೆಯಬಹುದು ಎಂದು ನಮಗನಿಸಿತ್ತು.

28.03.20ರ ಹೊತ್ತಿಗೆ ಸುಮಾರು 3500 ಮಂದಿ ಹಸಿದು ಬಸವಳಿದ ವಲಸೆ ಕಾರ್ಮಿಕರಿರುವ ಕ್ಲಸ್ಟರ್ಗಳ ಮಾಹಿತಿ ಲಭ್ಯವಾಗಿತ್ತು. ಇದರಲ್ಲಿ ಸುರತ್ಕಲ್‌ ಪೋಲೀಸ್‌ ಠಾಣೆಯ ಅಧಿಕಾರಿಗಳು ಖಚಿತ ಪಡಿಸಿಕೊಂಡು ನೀಡಿದ ವಲಸೆ ಕಾರ್ಮಿಕರ ಸಂಖ್ಯೆಯೇ ಸುಮಾರು 800ರಷ್ಟಿತ್ತು. ಅಭಿವೃಧ್ದಿಯ ರಥವನ್ನು ಗೋಣು ಬಗ್ಗಿಸಿ ತಳ್ಳುತ್ತಿದ್ದ ಅದೃಷ್ಯ ಕೈಗಳವು. ಹಾಗಾಗಿ ರಥದಲ್ಲಿ ಕುಳಿತು ಲಾಕ್ಡೌನ್‌ ಘೋಷಿಸಿದವರ ದೃಷ್ಟಿಯಿಂದ ಮರೆಯಾಗಿದ್ದವು. “ಬಡವರಿಗೆ ಆಹಾರ ವಿತರಣೆ ವ್ಯವಸ್ಥಿತವಾಗಿ ಆಗುತ್ತಿಲ್ಲ ಹಾಗಾಗಿ ಸರಕಾರದ ವತಿಯಿಂದಲೇ ಮಾಡುತ್ತೇವೆ, ಖಾಸಗಿಯವರು ಮಾಡುವಂತಿಲ್ಲ” ಎಂದು ತಾ 28ರಂದು ಜಿಲ್ಲಾಡಳಿತ ಘೋಷಿಸಿತು. ಮಂಗಳೂರು ನಗರಪಾಲಿಕೆಯಡಿಯಲ್ಲಿ ಆಹಾರ ವಿತರಣಾ ಸಮನ್ವಯ ಕೋಶವೊಂದನ್ನು ಮಾಡಿ ಕೆಲವು ಅಧಿಕಾರಿಗಳಿಗೆ ನಿರ್ವಹಣಾ ಜವಾಬ್ದಾರಿ ನೀಡಲಾಗಿತ್ತು. ಆದರೆ ವಲಸೆ ಕಾರ್ಮಿಕರ ಸಂಖ್ಯೆ ಎಷ್ಟಿರಬಹುದು ಎಂದು ಆಡಳಿತಕ್ಕೆ ಅಂದಾಜು ಇದ್ದಂತಿರಲಿಲ್ಲ. ಅವರಿಗೆ ನಮ್ಮಲ್ಲಿದ್ದ 
ಪಟ್ಟಿ ನೀಡಿದೆವು. ಅಷ್ಟಿರಲಿಕ್ಕಿಲ್ಲ ಬರೀ 1000 ಮಂದಿ ಇರಬಹುದು  ಎಂದರು. ಖಚಿತ ಮಾಹಿತಿ ದೊರೆತ ನಂತರವೇ ನಮ್ಮ ಪಟ್ಟಿ ತಯಾರಿಸಿದ್ದರಿಂದ, 3500 ಮಂದಿಯಷ್ಟೇ ಅಲ್ಲ ಇನ್ನೂ ಅನೇಕರ ಮಾಹಿತಿ ಬರುವುದಿದೆ, ಪಟ್ಟಿ ಇನ್ನೂ ಬೆಳೆಯಬಹುದು ಎಂದು ಮನವರಿಕೆ ಮಾಡಲು ಪ್ರಯತ್ನಿಸಿದೆವು. ಆರಂಭದ ದಿನಗಳಲ್ಲಿ ಸರಕಾರದ ವತಿಯಿಂದ ಪೂರೈಕೆ ಸಮರ್ಪಕವಾಗದಿರಬಹುದು ಹಾಗಾಗಿ ಅನುಮತಿ ಇಲ್ಲದ್ದಿದ್ದರೂ, ಆಹಾರ ತಯಾರಿಸಿ ವಿತರಣೆಗೆ ಸಿದ್ಧವಾಗಿರಿ, ಎಂದು ನಮ್ಮ ಸಂಪರ್ಕದಲ್ಲಿದ್ದ ಆಹಾರ ದಾನಿಗಳಿಗೆ ಸೂಚನೆ ನೀಡಿದ್ದೆವು. ಸರ್ಕಾರಿ ವ್ಯವಸ್ಥೆ ತಲುಪದಲ್ಲಿಗೆ ಇವರೆಲ್ಲಾ ಹೋಗಿ ವಲಸೆ ಕಾರ್ಮಿಕರ ಬೇಡಿಕೆಗನುಗುಣವಾಗಿ ಆಹಾರ ಅಥವಾ ಅಕ್ಕಿ, ಬೇಳೆ ತರಕಾರಿ ಇತ್ಯಾದಿಗಳನ್ನು ನೀಡಿದರು.

ಆದಾಯದ ಅವಕಾಶ, ಊರಿಗೆ ಮರಳಿ ಹೋಗುವ ಸ್ವಾತಂತ್ರ್ಯವನ್ನು ನಿರ್ಬಂಧಗಳು ಕಿತ್ತುಕೊಂಡು 21 ದಿನ ಕಳೆದಿದೆ. ದಿನಗೂಲಿಯನ್ನೇ ನಂಬಿಕೊಂಡಿದ್ದು ಲಾಕ್ಡೌನ್‌ನಿಂದಾಗಿ ಸಂತ್ರಸ್ತರಾದ ಮಂಗಳೂರು ಸುತ್ತಮುತ್ತಲ್ಲಿರುವ ವಲಸೆ ಕಾರ್ಮಿಕರ ಸಂಖ್ಯೆ ನಮ್ಮ ಪಟ್ಟಿಯಲ್ಲೇ ಸುಮಾರು 6 ಸಾವಿರದಷ್ಟಾಗಿದೆ. ಮನಪಾಕ್ಕೆ ಮಾಹಿತಿ ನೀಡಿದ್ದೇವೆ ಇವರಲ್ಲಿ ಹೆಚ್ಚಿನವರಿಗೆ ಮನಪಾ ವತಿಯಿಂದ ಆಹಾರ ವಿತರಣೆ ಆಗಿದೆ. ಪಾಲಿಕೆಯ, ನಮ್ಮ ಗಮನಕ್ಕೆ ಬರದ ಇನ್ನೂ ಎಷ್ಟೋ ಮಂದಿ ಇದ್ದಾರೆ. ದಿನವೂ ಮೊಬೈಲ್‌ಕರೆಗಳು ಬರುತ್ತಿವೆ. ಹೊಸಬರು ಪಟ್ಟಿಗೆ ಸೇರ್ಪಡೆಯಾಗುತ್ತಿದ್ದಾರೆ. ವಿಟ್ಲ, ಪುತ್ತೂರು, ಕಡಬ, ಬೆಳ್ತಂಗಡಿ, ಕುಂದಾಪುರಗಳಿಂದಲೂ ಉತ್ತರ ಭಾರತದ ವಲಸೆ ಕಾರ್ಮಿಕರ ಕರೆಗಳು ಬಂದಿವೆ. ಅಲ್ಲಿಯೂ ಸ್ಥಳೀಯ ಪರೋಪಕಾರಿಗಳ ಗುಂಪಿಗೆ ಮಾಹಿತಿ ನೀಡಲಾಗಿದೆ ಮತ್ತು ಅವರು ಹಸಿದವರಿಗೆ ಆಹಾರ ನೀಡುತ್ತಿದ್ದಾರೆ. ಕಾಸರಗೋಡು, ಗೋವಾ, ಮಹಾರಾಷ್ಟ್ರ, ಗುಜಾರಾತ್‌ಗಳಿಂದ ಕರೆಗಳು ಬಂದಿವೆ. ಅಲ್ಲಿ ಸಕ್ರಿಯವಾಗಿರುವ ಸಂಸ್ಥೆ/ವ್ಯಕ್ತಿಗಳನ್ನು ಸಂಪರ್ಕಿಸಿ ಕರೆ ಮಾಡಿದ ವಲಸೆ ಕಾರ್ಮಿಕರ ಮಾಹಿತಿ ನೀಡಿದ್ದೇವೆ.  

ಈ ವಲಸೆ ಕಾರ್ಮಿಕರು ಆತ್ಮಗೌರವದಿಂದ ದುಡಿದು ಉಣ್ಣುತ್ತಿದ್ದವರು, ಬಿಕ್ಷುಕರಲ್ಲ. ಲಾಕ್ಡೌನ್
ಕಾರಣಕ್ಕೆ ದುಡಿಯುವ ಅವಕಾಶವಿಲ್ಲದೆ ಹಸಿವಿನಿಂದ ಬಳಲಬೇಕಾಗಿ ಬಂತು. ಸಿದ್ದ ಆಹಾರಕ್ಕಿಂತ ಅಕ್ಕಿ, ಬೇಳೆ, ಹಿಟ್ಟು, ಎಣ್ಣೆ ದೊರೆತಲ್ಲಿ ಸ್ವತ: ಅಡಿಗೆ ಮಾಡಿ ಉಣ್ಣುವ ಮನಸ್ಸಿರುವವರು. ಇವರ ಆತ್ಮಗೌರವಕ್ಕೆ ಚ್ಯುತಿ ಬರದಂತೆ ಗುಣಮಟ್ಟದ ಆಹಾರವನ್ನು ಪ್ರತಿಫಲಾಪೇಕ್ಷೆಯಿಲ್ಲದೆ ಒದಗಿಸುವ ಕಾರ್ಯವನ್ನು, ನಮ್ಮ ಸಂಪರ್ಕದಲ್ಲಿದ್ದವರ ಪೈಕಿ ಸಂಘಟನೆ ಹಾಗೂ ವೈಯಕ್ತಿಕ ನೆಲೆಯಲ್ಲಿ ಶಬೀರ್, ಅಮೀರ್‌, ಕಾಸಿಂ, ರವಿರಾಜ್, ಸುಖಪಾಲ್‌ಪೊಳಲಿ, ಮಂಜುನಾಥ್, ಜರೂದ್‌ ಮತ್ತು ಸ್ನೇಹಿತರು, ಹುಸೇನ್‌ ಕೋಡಿಬೆಂಗ್ರೆ, ಸುಲೈಮಾನ್‌ ಕಲ್ಲರ್ಪೆ, ಜಿಯಾ, ಮನೋನಿತ್, ಉದ್ಯಮಿ ಸುಮೀತ್‌ರಾವ್, ಎಂ. ಬಿ ಸದಾಶಿವ್ ಮಾಡಿದ್ದಾರೆ. ‌ಮಹಾನಗರ ಪಾಲಿಕೆಯ ಕೋವಿಡ್-19 ‌ಆಹಾರ ಕೋಶದ ಚಿತ್ತರಂಜನ್‌, ಖಾದರ್‌ ಮೊದಲಾದವರು ಶ್ರದ್ಧೆ ಹಾಗೂ ಸಂವೇದನಾಶೀಲತೆಯಿಂದ ಹಸಿದವರಿಗೆ ಪ್ರತಿಕ್ರಿಯಿಸಿದ್ದಾರೆ. ಲಾಕ್ಡೌನ್‌‌ ಮೇ 3ರ ವರೆಗೆ ವಿಸ್ತರಿಸಿದ ಘೋಷಣೆಯಾಗಿದೆ. ಹೆಚ್ಚಿನ ವಲಸೆ ಕಾರ್ಮಿಕರಿಗೆ ಒದಗಿಸಿರುವ ಅಕ್ಕಿ, ಬೇಳೆ ಇತ್ಯಾದಿ ಮುಗಿಯುತ್ತಾ ಬಂದಿವೆ. ಸರಕಾರ ಪುನ: ಒದಗಿಸಬೇಕಾಗುತ್ತದೆ. ಕೆಲವೊಂದೆಡೆ ವಿತರಣಾ ಸಮಸ್ಯೆಗಳು, ಗುಣಮಟ್ಟದ ಸಮಸ್ಯೆಗಳಿವೆ. ಆದರೆ ಅವುಗಳನ್ನೇ ಚರ್ಚೆಯ ವಿಷಯವನ್ನಾಗಿ ಮಾಡುತ್ತಾ ಕೂರುವ ಸಮಯ ಇದಲ್ಲ. ಆದ್ಯತೆ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯಕ್ಕಿರಬೇಕು. ಅಭಿವೃದ್ಧಿಯ ರಥವನ್ನು ತಳ್ಳುತ್ತಾ ನಗರಗಳ ಬೆಳವಣಿಗೆಗೆ ಬದುಕನ್ನು ತೇಯ್ದವರಲ್ಲವೇ ಅವರು?

ಮಹಾರಾಷ್ಟ್ರದಿಂದ ಬಂದ ಕರೆಯ ವಿವರಗಳನ್ನು ಬೀದಿ ಬದಿ ಮಾರಾಟಗಾರರ ಜೊತೆ ಕೆಲಸ ಮಾಡುತ್ತಿದ್ದ ಮುಂಬೈಯ ಮಿತ್ರನೊಬ್ಬನಿಗೆ ನಾನು ನೀಡಿ ಎನಾದರೂ ವ್ಯವಸ್ಥೆ ಮಾಡುವಂತೆ ಕೋರಿದ ಒಂದು ಗಂಟೆಯಲ್ಲಿ ಮಹಾರಾಷ್ಟದಿಂದ ಒಂದು ಕರೆ ಬಂತು. ‌ʻʻನಾನು ಪಾಲ್ಗರ್ ನಗರಪಾಲಿಕೆಯ ಕೋವಿಡ್ ಸಂತ್ರಸ್ತರ ಆಹಾರ ವ್ಯವಸ್ಥೆಯ ನೋಡಲ್ ಅಧಿಕಾರಿ, ನೀವು ನೀಡಿದ ಮೊಬೈಲ್ ಸಂಖ್ಯೆಯ ಮಹಿಳೆಯ ಸ್ಥಿತಿಯನ್ನು ಪರಿಶೀಲಿಸಲು ಸಿಬ್ಬಂದಿಯೋರ್ವರನ್ನು ಕಳುಹಿಸಿದ್ದೆ, ಆಕೆ ಕಷ್ಟದಲ್ಲಿದ್ದಾಳೆ ಎಂದು ಖಾತ್ರಿಯಾಗಿದೆ, ಊಟ ಕಳುಹಿಸಿದ್ದೇವೆ, ಜೊತೆಗೆ ಅಡುಗೆ ಸಾಮಾಗ್ರಿಗಳನ್ನೂ ನೀಡುತ್ತೇವೆ" ಸಂತೋಷವಾಯಿತು "ಧನ್ಯವಾದಗಳು" ಎಂದೆ. ``ಅಯ್ಯೋ, ನಮ್ಮ ಕಣ್ಣಿಗೆ ಬೀಳದವರನ್ನು ಅಷ್ಟು ದೂರದಿಂದ ನಮಗೆ ತೋರಿಸಿಕೊಟ್ಟಿರಿ, ನಾವೇ ನಿಮಗೆ ದನ್ಯವಾದ ಹೇಳಬೇಕು. ಅಲ್ಲಾ, ನಿಮಗೆ ಕರ್ನಾಟಕದಲ್ಲಿ ಕುಳಿತೇ, ಮಹಾರಾಷ್ಟ್ರದಲ್ಲಿ ಹಸಿದು ಕುಳಿತಿದ್ದಾಕೆಯ ಬಗ್ಗೆ ಹೇಗೆ ಗೊತ್ತಾಯಿತು?" ಎಂದು ಕೇಳಿದರು. ʻʻಇಲ್ಲಿ ಕೆಲವು ವಲಸಿಗ ಕಾರ್ಮಿಕರ ಊಟದ ವ್ಯವಸ್ಥೆಗೆ ಸಹಾಯ ಮಾಡಿದ್ದೆವು ಅವರಲ್ಲೋರ್ವರು ಆಕೆಗೆ ನನ್ನ ನಂಬರ್ ನೀಡಿದರಂತೆ” ಎಂದೆ. ʻʻಒಳ್ಳೇ ಕೆಲಸ, ಮುಂದುವರಿಸಿ, ಇಲ್ಲಿಂದ ಕರೆಗಳು ಬಂದರೆ ನನಗೆ ತಿಳಿಸಿ" ಎಂದು ವಿದಾಯ ಹೇಳಿದರು. ಮೊಬೈಲ್ ಸಂಪರ್ಕ ಆಕೆಯ ಸಾಧ್ಯತೆಯ ಮಿತಿಯೊಳಗಿದ್ದುದರಿಂದ ಆಕೆಗೆ ತನ್ನವರೊಂದಿಗೆ ಸಂಪರ್ಕ ಸಾಧ್ಯವಿತ್ತು, ಹಾಗಾಗಿ ನನ್ನನ್ನು ಸಂಪರ್ಕಿಸಲೂ ಸಾಧ್ಯವಾಯಿತು, ಪರಿಹಾರದ ದಾರಿಯೂ ಸುಗಮವಾಯಿತು. ನಿಜವಾಗಿ ಧನ್ಯವಾದ ಹೇಳಬೇಕಾದದ್ದು ಜನಾಸಾಮಾನ್ಯರ ಕೈ ಅಳವಿಗೆ ಬಂದ ಮೊಬೈಲ್ ತಂತ್ರಜ್ಞಾನಕ್ಕೆ ಎಂದೆನಿಸಿತು.‌

*ವಿದ್ಯಾನ ಅನುಭವಗಳ ಕನ್ನಡೀಕರಣ
ಚಿತ್ರಗಳು : ಸಂತ್ರಸ್ತ ವಲಸೆ ಕಾರ್ಮಿಕರಿಂದ